ಹುಬ್ಬಳ್ಳಿ: ಲೋಕ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕಾಂಚಾಣ ಕುಣಿಯುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ ಮೇಲೆ ನಡೆಯುತ್ತಿರುವ ಬೆಟ್ಟಿಂಗ್ ಅನ್ನು ಮೀರಿಸುವಂತೆ ರಾಜಕೀಯ ಬೆಟ್ಟಿಂಗ್ ಕಾವು ಪಡೆದುಕೊಂಡಿದೆ. ಧಾರವಾಡ ಲೋಕಸಭಾ ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ, ಬಾಡೂಟ ಸೇರಿದಂತೆ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಟ್ಟಿರುವುದು ಅಚ್ಚರಿ ಮೂಡಿಸಿದೆ..
ಧರ್ಮದ ಸಂಘರ್ಷ, ಸ್ವಾಮೀಜಿಗಳ ಸ್ಪರ್ಧೆ ವಿಚಾರದಿಂದ ಭಾರೀ ಕುತೂಹಲ ಮೂಡಿಸಿದ್ದು ಧಾರವಾಡ ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ಮತದಾನ ಮುಗಿದಿದೆ, ಇದೀಗ ಫಲಿತಾಂಶದ ಬಗ್ಗೆ ಚರ್ಚೆ ಜೋರಾಗಿದೆ. ಬೆಟ್ಟಿಂಗ್ ಭರಾಟೆಯೂ ತೀವ್ರತೆ ಪಡೆದು ಕೊಂಡಿದೆ. ಒಂದು ಕಡೆ ಹಾಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರನ್ನ ಮಣಿಸಲು ಸಚಿವ ಸಂತೋಷ್ ಲಾಡ್ ನೇತೃತ್ವದ ಕಾಂಗ್ರೆಸ್ ಟೀಂ ಟೊಂಕ ಕಟ್ಟಿ ನಿಂತಿತ್ತು. ಮತ್ತೊಂದೆಡೆ ಜೋಶಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಹೀಗಾಗಿ ಧಾರವಾಡ ಲೋಕಸಭಾ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಲೋಕಸಭಾ ಕ್ಷೇತ್ರದ ಮತದಾನ ಐದು ದಿನಗಳ ಹಿಂದಷ್ಟೇ ಮುಗಿದಿದೆ. ಫಲಿತಾಂಶವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಇವಿಎಂ ಮಷಿನ್‌ಗಳು ಭಾರಿ ಭದ್ರತೆಯಲ್ಲಿ ಇವೆ. ಜೂನ್ 4 ರಂದು ನಡೆಯಲಿರುವ ಮತ ಎಣಿಕೆ ದಿನದಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಚುನಾವಣೆ ಫಲಿತಾಂಶಕ್ಕೆ ಇನ್ನೂ 23 ದಿನಗಳು ಬಾಕಿ ಇವೆ. ಈ ಮಧ್ಯೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆಲುವು-ಸೋಲಿನ ಸಾಧ್ಯತೆ ಬಗ್ಗೆ ಸಾವಿರಾರು ರೂಪಾಯಿಗಳ ಬೆಟ್ಟಿಂಗ್ ಆರಂಭಗೊಂಡಿದೆ. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಎಷ್ಟು ಮತಗಳು ಬರಬಹುದು..? ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆಯಬಹುದು..? ಎಂಬುದರ ಮೇಲೆ ಬೆಟ್ಟಿಂಗ್ ನಡೆದಿದೆ. ಮತ್ತೊಂದೆಡೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾನೆ..? ಯಾವ ಅಭ್ಯರ್ಥಿ ಸೋಲುತ್ತಾನೆ..? ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಲಭಿಸುತ್ತದೆ..? ಕಾಂಗ್ರೆಸ್ ಗೆ ಎಷ್ಟು ಸೀಟುಗಳು ಬರುತ್ತವೆ…? ಎಂಬೆಲ್ಲ ವಿಷಯಗಳ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. 25 ಸಾವಿರ ರೂ.ಗಳಿಂದ ಆರಂಭಗೊಳ್ಳುತ್ತಿರುವ ಬೆಟ್ಟಿಂಗ್, ಲಕ್ಷಾಂತರ ರೂ.ವರೆಗೂ ನಡೆಯುತ್ತಿದೆ..
ಇನ್ನೂ ಕೆಲವರು ತಮ್ಮ ಬೈಕ್‌ಗಳನ್ನು ಬೆಟ್ಟಿಂಗ್‌ಗೆ ಇಟ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಚಕ್ಕಡಿ, ಟ್ರ್ಯಾಕ್ಟರ್ ಅಷ್ಟೇ ಅಲ್ಲ, ಎತ್ತುಗಳನ್ನು ಸಹ ಬೆಟ್ಟಿಂಗ್‌ಗೆ ಇಡಲಾಗುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವವರ ವಿರುದ್ದ ಕ್ರಮ ಕೈಗೊಳ್ಳುವ ಪೊಲೀಸರು, ಇದೀಗ ಈ ಚುನಾವಣೆ ಫಲಿತಾಂಶದ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿರುವವರ ಪತ್ತೆಗೂ ಜಾಲ ಬೀಸಿದ್ದಾರೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಷ್ಟೇ ಅಲ್ಲದೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರು ಠೇವಣಿ ಕಳೆದುಕೊಳ್ಳುತ್ತಾರೆ..? ಯಾವ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಕಠಿಣ ಸ್ಪರ್ಧೆ ಒಡ್ಡುತ್ತಾನೆ..? ಎಂಬುದರ ಬಗ್ಗೆಯೂ ಬೆಟ್ಟಿಂಗ್ ನಡೆಯುತ್ತಿರುವುದು ಕೇಳಿಬರುತ್ತಿದೆ. ಎದುರಾಳಿ ರಾಜಕೀಯ ಪಕ್ಷದ ಕಾರ್ಯಕರ್ತರು, ಕಾರ್ಯಕರ್ತರ ಸ್ನೇಹಿತರು ಪರಸ್ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಏಕೆ ಸಣ್ಣಪುಟ್ಟ ರಾಜಕಾರಣಿಗಳು ಸಹ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿರುವದನ್ನ ಮರೆಮಾಚಲು ಆಗಿಲ್ಲ. ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿರುವವರು ತಮ್ಮ ಪಕ್ಷದ ಅಭ್ಯರ್ಥಿ ಅಥವಾ ಹಿರಿಯ ರಾಜಕಾರಣಿಗಳಿಗೆ ಅಭ್ಯರ್ಥಿ ಪರವಾಗಿ ಇಷ್ಟು ಹಣ ಕಟ್ಟಿದ್ದೇನೆ. ಅವರು ಹೇಗೆ ಗೆಲ್ಲುವುದಿಲ್ಲವೋ ನೋಡಿಯೇ ಬಿಡೋಣ ಎಂದು ಹೆಮ್ಮೆಯಿಂದ ಹೇಳುತ್ತಿರುವುದು ಸಹ ಮೂಲಗಳಿಂದ ಗೊತ್ತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





