ಧಾರವಾಡ : ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಇಂದು ಚುನಾವಣೆ ಜರುಗಲಿದ್ದು, ಬೆಳಿಗ್ಗೆ 9 ಗಂಟೆಯಿಂದ ನಾಮಪತ್ರ ಸಲ್ಲಿಕಾ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಪಾಲಿಕೆ ಕಚೇರಿ ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಈ ಚುನಾವಣೆ ಜರುಗಲಿದೆ. ಬೆಳಿಗ್ಗೆ 9ಕ್ಕೆ ನಾಮಪತ್ರ ಸಲ್ಲಿಕಾ ಪ್ರಕ್ರಿಯೆ ಆರಂಭವಾಗಿ 11 ಗಂಟೆಗೆ ಮುಕ್ತಾಯವಾಗಲಿದೆ. ಆ ನಂತರ ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ಮೀಸಲಾತಿ ನಿಗದಿಯಾಗಿದೆ. 82 ಜನ ಸದಸ್ಯ ಬಲಾಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಜನ ಬಿಜೆಪಿ ಸದಸ್ಯರಿದ್ದಾರೆ. 33 ಜನ ಕಾಂಗ್ರೆಸ್, ಎಂಐಎಂ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರ ಸದಸ್ಯರಿದ್ದಾರೆ.
ಸಂಸದ, ಶಾಸಕರು, ಪರಿಷತ್ ಸದಸ್ಯರು ಸೇರಿ ಒಟ್ಟು 89 ಸಂಖ್ಯಾ ಬಲ ಆಗಲಿದ್ದು, ಅಡ್ಡ ಮತದಾನ ಆಗಬಹುದು ಎಂಬ ಕಾರಣಕ್ಕೆ ಉಭಯ ಪಕ್ಷದ ಅಧ್ಯಕ್ಷರಿಂದ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಲಾಗಿದೆ. ಬೆಳಗಾವಿ ಪ್ರಭಾರ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ನೇತೃತ್ವದಲ್ಲಿ ಈ ಚುನಾವಣೆ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




